ಭೂಮಿಯ ಉಪಯೋಗಕ್ಕಾಗಿ, ವಿಶೇಷತಃ ಕೃಷಿ ಭೂಮಿಯ ಉಪಯೋಗಕ್ಕಾಗಿ, ಅದರ ಒಡೆಯನಿಗೆ ಸಲ್ಲುವ ಪ್ರತಿಫಲ (ರೆಂಟ್). ಭೂಮಿಯ ಮತ್ತು ನಿಸರ್ಗದ ಇತರ ನಿರುಪಾಧಿಕ ಕೊಡುಗೆಗಳ ಒಡೆತನದಿಂದ ಪಡೆದ ವರಮಾನ- ಎಂಬುದು ಆಲ್ಫ್ರೆ ಮಾರ್ಷಲ್ ನೀಡಿರುವ ವ್ಯಾಖ್ಯೆ. ಬಳಕೆಗಾಗಿ ಭೂಮಿಯನ್ನು ಗುತ್ತಿಗೆಗೆ ಕೊಟ್ಟಿದ್ದಕ್ಕಾಗಿ ಭೂಮಾಲೀಕ ಪಡೆದ ಪರಿಹಾರವೇ ಗೇಣಿ, ಎಂಬುದು ನ್ಯಾಯಶಾಸ್ತ್ರದ ವ್ಯಾಖ್ಯೆ.

18ನೆಯ ಶತಮಾನದ ನಡುಗಾಲದಲ್ಲಿದ್ದ ಫ್ರೆಂಚ್ ಪ್ರಕೃತಿಪ್ರಾಧಾನ್ಯವಾದಿಗಳು (ಫಿಸಿಯೊಕ್ರಾಟ್ಸ್‌) ಭೂಮಿ ಮತ್ತು ಅದರ ವಿಚಿತ್ರ ಶಕ್ತಿಗಳನ್ನು ಕುರಿತು ವಿಚಾರ ನಡೆಸಿದ್ದರು. ಆದರೆ ಭೂಮಿಯಿಂದ ಬಂದ ವರಮಾನವನ್ನು ಅವರು ಗೇಣಿಯೆಂದು ಕರೆಯಲಿಲ್ಲ, ನಿವ್ವಳ ಉತ್ಪನ್ನವೆಂದು ಕರೆದರು. ದುಡಿಮೆಯ ವೆಚ್ಚಕ್ಕಿಂತ ಅಧಿಕವಾದ ಪ್ರತಿಫಲವನ್ನು ನೀಡುವ ಶಕ್ತಿ ಭೂಮಿಗೆ ಮಾತ್ರ ಇದೆಯೆಂಬುದು ಅವರ ಭಾವನೆಯಾಗಿತ್ತು. 

ಅನಂತರ ಬಂದ ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಆಡಂ ಸ್ಮಿತ್ನ ದೃಷ್ಟಿ ಬೇರೆಯಾಗಿತ್ತು. ಭೂಮಿಯ ಶಕ್ತಿಗಿಂತಲೂ ಶ್ರಮವಿಭಜನೆಯೇ ರಾಷ್ಟ್ರಗಳ ಸಂಪತ್ತಿಗೆ ಆಧಾರವೆಂದು ಆತ ಹೇಳಿದ. ದುಡಿಮೆಗೆ ಪ್ರತಿಫಲವಾದ ಕೂಲಿ, ಬಂಡವಾಳಕ್ಕೆ ಪ್ರತಿಫಲವಾದ ಲಾಭ, ಭೂಮಿಗೆ ಪ್ರತಿಫಲವಾದ ಗೇಣಿ- ಇವು ಮೂರೂ ಅಂಶಗಳು ಪದಾರ್ಥಗಳ ಬೆಲೆಯಲ್ಲಿ ಸೇರಿವೆಯೆಂದು ಆತ ಪ್ರಥಮತಃ ವಿಶ್ಲೇಷಿಸಿದ. ಕೂಲಿ, ಲಾಭ ಮತ್ತು ಗೇಣಿಗಳ ಸಹಜ ದರವೊಂದು ಇದೆಯೆಂಬುದು ಆತನ ಭಾವನೆಯಾಗಿತ್ತು. ಭೂಮಿ ಇರುವಂಥ ಸ್ಥಳದ ನೆರೆಹೊರೆ ಅಥವಾ ಅಲ್ಲಿಯ ಸಮಾಜದ ಸಾಮಾನ್ಯ ಪರಿಸ್ಥಿತಿ ಗಳಿಂದಲೂ ಭೂಮಿಯ ಸಹಜವಾದ ಅಥವಾ ಅಭಿವೃದ್ಧಿ ಪಡಿಸಿದ ಫಲವತ್ತತೆ ಯಿಂದಲೂ ಅದರ ಸಾಮಾನ್ಯ ಅಥವಾ ಸರಾಸರಿ ಗೇಣಿಯ ದರ ನಿಶ್ಚಿತವಾಗುತ್ತದೆ ಯೆಂದು ಅವನು ಹೇಳಿದ್ದಾನೆ. ಆತನ ಪ್ರಕಾರ ನೆಲದ ಉತ್ಪನ್ನ ಎರಡು ಬಗೆ: 

 ನೆಲದೊಡೆಯನಿಗೆ ಯಾವಾಗಲೂ ಗೇಣಿಯನ್ನು ದೊರಕಿಸಿಕೊಡುವಂಥ ಉತ್ಪನ್ನ (ಉದಾ: ಆಹಾರ) 
 ಕುರಿತು ವಿವೇಚನೆ ನಡೆಸುವಾಗ ಆಡಂ ಸ್ಮಿತ್ ಸೀಮಾಂತ ತತ್ತ್ವದ ದೃಗ್ಗೋಚರ ಮಾಡಿಸಿದನಾದರೂ ಗೇಣಿಯನ್ನು ಕುರಿತು ಅವನ ವಿವೇಚನೆ ಅಸ್ಪಷ್ಟವಾಗಿದೆ. 

ರಿಕಾರ್ಡೋನ ಗೇಣಿ ಸಿದ್ಧಾಂತ 

19ನೆಯ ಶತಮಾನದ ಆದಿ ಭಾಗದಲ್ಲಿ ಡೇವಿಡ್ ರಿಕಾರ್ಡೋ ಗೇಣಿಯನ್ನು ಕುರಿತ ಸಿದ್ಧಾಂತವೊಂದನ್ನು ಮಂಡಿಸಿದ. ಇದೊಂದು ಅಭಿಜಾತ ಸಿದ್ಧಾಂತ. ಆತನ ಅಭಿಪ್ರಾಯದಲ್ಲಿ ಗೇಣಿಗೆ ಮೂಲವಾದ್ದು ಪ್ರಕೃತಿಯ ಕೃಪಣತನವೇ ವಿನಾ ಔದಾರ್ಯವಲ್ಲ. ಉತ್ತಮ ದರ್ಜೆಯ ಜಮೀನಿನ ಅಭಾವವೇ ಗೇಣಿಗೆ ಕಾರಣ. ಕೀಳು ದರ್ಜೆಯ ಜಮೀನಿಗೆ ಬೇಸಾಯವನ್ನು ವಿಸ್ತರಿಸಿದಾಗ, ಉತ್ತಮ ಜಮೀನಿನಲ್ಲಿ ದೊರೆಯುವ ಆಧಿಕ್ಯವನ್ನು ಭೂಮಾಲೀಕರು ಗೇಣಿ ಎಂದು ತೆಗೆದುಕೊಳ್ಳುತ್ತಾರೆ. ಭೂಮಾಲೀಕರು ಪಡೆಯುವ, ಸಂಪಾದಿಸದ ವರಮಾನವೇ ಗೇಣಿ. ಗೇಣಿ ಎಂದರೆ ಭೂಮಿಯ ಮೂಲ ಹಾಗೂ ಅವಿನಾಶಿ ಶಕ್ತಿಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಭೂಮಾಲೀಕನಿಗೆ ಕೊಡುವ ಭೂಮಿಯ ಉತ್ಪನ್ನದ ಭಾಗ ಎಂದು ರಿಕಾರ್ಡೋ ನಿರೂಪಿಸಿದ್ದಾನೆ. 
ಭೂಮಿಯ ಗುಣ ಮತ್ತು ಸ್ಥಾನಿಕ ಸೌಕರ್ಯ ಎಲ್ಲೆಡೆಯೂ ಏಕರೀತಿ ಇರುವುದಿಲ್ಲ. ಅವು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತವೆ. ಒಂದು ಪ್ರದೇಶದಲ್ಲಿ ಜನ ನೆಲಸುವಾಗ ಮೊದಲು ಉತ್ಕೃಷ್ಟ ಜಮೀನನ್ನು ಬೇಸಾಯ ಮಾಡುತ್ತಾರೆ. ಕಾಲಕ್ರಮದಲ್ಲಿ ಜನಸಂಖ್ಯೆ ಹೆಚ್ಚಿ, ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದಾಗ, ಕಡಿಮೆ ದರ್ಜೆಯ ಜಮೀನುಗಳನ್ನೂ ಬೇಸಾಯ ಮಾಡಬೇಕಾಗುತ್ತದೆ. ಆದರೆ ಮೇಲುದರ್ಜೆಯ ಜಮೀನುಗಳಿಗೆ ಹಾಕುವಷ್ಟೇ ಪ್ರಮಾಣದಲ್ಲಿ ಬಂಡವಾಳ ಮತ್ತಿತರ ಉತ್ಪಾದನಾಂಗಗಳನ್ನು ಕಡಿಮೆ ದರ್ಜೆಯ ಜಮೀನುಗಳಿಗೂ ಹಾಕಿದಾಗ, ಇಳಿಮುಖ ಪ್ರತಿಫಲ ನಿಯಮ ಅನ್ವಯವಾಗುತ್ತದೆ. ಅಂದರೆ ಕೆಳದರ್ಜೆಯ ಭೂಮಿಯ ಉತ್ಪಾದನ ವೆಚ್ಚ ಅಧಿಕವಾಗುತ್ತದೆ. ಆ ವೆಚ್ಚಕ್ಕಿಂತ ಧಾನ್ಯದ ಬೆಲೆ ಕಡಿಮೆಯಿಲ್ಲದಿದ್ದರೆ ಮಾತ್ರ ಆ ಕೀಳು ಭೂಮಿಯನ್ನು ಬೇಸಾಯ ಮಾಡಬಹುದು. ಆದರೆ ಪರಿಪುರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಮೇಲು ಕೀಳು ಜಮೀನುಗಳೆರಡರ ಉತ್ಪನ್ನಕ್ಕೂ ಬೆಲೆ ಒಂದೇ ದರದಲ್ಲಿರುತ್ತದೆ. ಆದ್ದರಿಂದ ಕಡಿಮೆ ವೆಚ್ಚ ತಗಲುವ ಮೇಲ್ದರ್ಜೆಯ ಭೂಮಿಯಲ್ಲಿ ಉತ್ಪನ್ನದ ಆಧಿಕ್ಯ ಕಂಡುಬರುತ್ತದೆ. ಈ ಆಧಿಕ್ಯಕ್ಕೆ ಕಾರಣ ಮೇಲ್ದರ್ಜೆಯ ಹಾಗೂ ಕೆಳದರ್ಜೆಯ ಜಮೀನುಗಳ ಸ್ವಾಭಾವಿಕ ಗುಣಗಳ ವ್ಯತ್ಯಾಸವೇ ವಿನಾ ಬೇರೇನೂ ಅಲ್ಲ. ಇದು ಭಿನ್ನಕ ಆಧಿಕ್ಯ (ಡಿಫರೆನ್ಷಿಯಲ್ ಸಪರ್ಲ್‌ಸ್). ಇದನ್ನು ಭೂಮಾಲೀಕ ಗೇಣಿ ಎಂದು ತೆಗೆದುಕೊಳ್ಳುತ್ತಾನೆ. ಧಾನ್ಯದ ಬೆಲೆ ಸೀಮಾಂತ ಭೂಮಿಯ ಉತ್ಪಾದನ ವೆಚ್ಚಕ್ಕೆ ಸಮನಾಗಿರುತ್ತದೆಯಾದ್ದರಿಂದ ಆ ಭೂಮಿಯಿಂದ ಅಧಿಕೋತ್ಪನ್ನ ದೊರಕುವುದಿಲ್ಲ. ಅದು ಗೇಣಿರಹಿತ ಭೂಮಿ. 

ಧಾನ್ಯದ ಬೆಲೆ ನಿರ್ಧಾರವಾಗುವುದು ಸೀಮಾಂತ ಭೂಮಿ ಅಥವಾ ಗೇಣಿ ರಹಿತ ಭೂಮಿಯ ಉತ್ಪಾದನ ವೆಚ್ಚದ ಆಧಾರದ ಮೇಲಾದ್ದರಿಂದ ರಿಕಾರ್ಡೋನ ಅಭಿಪ್ರಾಯದಲ್ಲಿ ಬೆಲೆಯಿಂದ ಗೇಣಿ ನಿರ್ಧರಿಸಲ್ಪಡುವುದೇ ವಿನಾ ಬೆಲೆಯನ್ನು ಗೇಣಿ ನಿರ್ಧರಿಸುವುದಿಲ್ಲ. ಗೇಣಿ ಕೊಡಬೇಕಾಗಿ ಬಂದುದೇ ಧಾನ್ಯದ ಬೆಲೆ ಏರಿಕೆಗೆ ಕಾರಣವೆಂದು ಹೇಳುವುದು ಸರಿಯಲ್ಲ. ಧಾನ್ಯದ ಬೆಲೆ ಏರಿದಷ್ಟೂ ಸೀಮಾಂತ ಭೂಮಿಗೆ ಮೇಲ್ಪಟ್ಟ ಜಮೀನುಗಳ ಪ್ರತಿಫಲದ ಆಧಿಕ್ಯವೂ ಏರುತ್ತದೆ. ಗೇಣಿಯೂ ಹೆಚ್ಚುತ್ತದೆ. 

ಮೇಲೆ ವಿವರಿಸಿದ, ರಿಕಾರ್ಡೋ ನೀಡಿರುವ ಗೇಣಿ ಸಿದ್ಧಾಂತ ವಿಸ್ತೃತ (ವ್ಯಾಪಕ) ವ್ಯವಸಾಯ ಪದ್ಧತಿ, ಸಾಂದ್ರ ವ್ಯವಸಾಯ ಪದ್ಧತಿ ಎರಡಕ್ಕೂ ಅನ್ವಯವಾಗುತ್ತದೆ. ವ್ಯಾಪಕ ಕೃಷಿ ಪದ್ಧತಿಯಲ್ಲಿ ಭೂಮಿಯ ಪರಿಮಾಣವನ್ನು ಹೆಚ್ಚಿಸುತ್ತ, ಉಳಿದ ಉತ್ಪಾದನಾಂಗಗಳ ಪರಿಮಾಣವನ್ನು ಒಂದೇ ಮಟ್ಟದಲ್ಲಿಡಲಾಗುವುದು. ಸಾಂದ್ರ ವ್ಯವಸಾಯ ಪದ್ಧತಿಯಲ್ಲಿ ಭೂಮಿಯ ಪರಿಮಾಣವನ್ನು ಹೆಚ್ಚಿಸಲು ಸಾಧ್ಯವಿಲ್ಲದ್ದರಿಂದ, ಇತರ ಉತ್ಪಾದನಾಂಗಗಳ ಪರಿಮಾಣವನ್ನು ಹೆಚ್ಚು ಮಾಡಲಾಗುವುದು. ಈ ಎರಡು ಬೇಸಾಯ ಪದ್ಧತಿಗಳಲ್ಲೂ ಇಳಿಮುಖ ಸೀಮಾಂತ ಪ್ರತಿಫಲ ಪ್ರವೃತ್ತಿ ತಲೆದೋರುತ್ತದೆ.

ವ್ಯಾಪಕ ವ್ಯವಸಾಯ ಪದ್ಧತಿಯನ್ನು ಸೂಚಿಸುವ ನಕ್ಷೆ 1 ರಲ್ಲಿ ಒಂದು ಗೊತ್ತಾದ ಪರಿಮಾಣದ ಬಂಡವಾಳ ಮತ್ತಿತರ ಉತ್ಪಾದನಾಂಗಗಳನ್ನು ಪ್ರಥಮ ದರ್ಜೆಯ ಜಮೀನಿಗೆ ಹಾಕಿದಾಗ 10 ಕ್ವಿಂಟಲ್, ದ್ವಿತೀಯ ದರ್ಜೆಯ ಜಮೀನಿಗೆ ಹಾಕಿದಾಗ 8 ಕ್ವಿಂಟಲ್, ತೃತೀಯ ದರ್ಜೆಯ ಜಮೀನಿಗೆ ಹಾಕಿದಾಗ 5 ಕ್ವಿಂಟಲ್ ಮತ್ತು ಚತುರ್ಥ ದರ್ಜೆಯ ಜಮೀನಿಗೆ ಹಾಕಿದಾಗ 3 ಕ್ವಿಂಟಲ್ ಬತ್ತ ಬರುತ್ತದೆ. ಇಲ್ಲಿ ಬತ್ತದ ಏಕಮಾನದ ಬೆಲೆ ನಾಲ್ಕನೆಯ ದರ್ಜೆಯ ಜಮೀನಿನ ಏಕಮಾನ ಉತ್ಪಾದನ ವೆಚ್ಚಕ್ಕೆ ಸಮನಾಗಿರುತ್ತದೆ. ಏಕೆಂದರೆ ನಾಲ್ಕನೆಯ ದರ್ಜೆಯ ಜಮೀನು ಸೀಮಾಂತ ಅಥವಾ ಗೇಣಿ ರಹಿತ ಭೂಮಿ. ಇದಕ್ಕೆ ಮೇಲ್ಮಟ್ಟದ ಮೂರು ಜಮೀನುಗಳಿಂದ ಭೂಮಾಲೀಕರಿಗೆ ಸಿಗುವ ಗೇಣಿ ಅನುಕ್ರಮವಾಗಿ 2, 5, 7, ಕ್ವಿಂಟಲ್ ಬತ್ತದ ಬೆಲೆ.

ಹಾಗೆಯೇ ಸಾಂದ್ರ ವ್ಯವಸಾಯ ಪದ್ಧತಿಯನ್ನು ಸೂಚಿಸುವ ನಕ್ಷೆ 2 ರಲ್ಲಿ, ಒಂದು ಗೊತ್ತಾದ ಗಾತ್ರದ ಭೂಮಿಗೇ ಹೆಚ್ಚು ಹೆಚ್ಚು ಪರಿಮಾಣಗಳಲ್ಲಿ ಶ್ರಮ ಮತ್ತು ಬಂಡವಾಳಗಳನ್ನು ಹಾಕಿದಾಗ ಮೊದಲನೆಯದರಿಂದ 10 ಕ್ವಿಂಟಲ್, ಎರಡನೆಯದರಿಂದ 8 ಕ್ವಿಂಟಲ್, ಮೂರನೆಯದರಿಂದ 5 ಕ್ವಿಂಟಲ್ ಮತ್ತು ನಾಲ್ಕನೆಯದರಿಂದ 3 ಕ್ವಿಂಟಲ್ ಬತ್ತ ಬರುತ್ತದೆ. ಇಲ್ಲಿಯೂ ನಾಲ್ಕನೆಯ ಪರಿಮಾಣದಿಂದ ಬರುವ ಬತ್ತದ ಉತ್ಪಾದನಾಂಗಗಳ (ಫ್ಯಾಕ್ಟರ್ಸ್‌ ಆಫ್ ಪ್ರೊಡಕ್ಷನ್) ವೆಚ್ಚ 3 ಕ್ವಿಂಟಲ್ ಬತ್ತದ ಬೆಲೆಗೆ ಸಮ. ಆದ್ದರಿಂದ ನಾಲ್ಕನೆಯ ಪರಿಮಾಣದ ಶ್ರಮ ಮತ್ತು ಬಂಡವಾಳದಿಂದ ಗೇಣಿ ಸಿಕ್ಕುವುದಿಲ್ಲ. ಇನ್ನುಳಿದ (ಹೆಚ್ಚಿನ ಮಟ್ಟಗಳ) ಪರಿಮಾಣಗಳಿಂದ ಅನುಕ್ರಮವಾಗಿ 2, 5, 7 ಕ್ವಿಂಟಲ್ ಬತ್ತ ಗೇಣಿಯಾಗಿ ಸಿಕ್ಕುತ್ತದೆ. 

ರಿಕಾರ್ಡೋನ ಅಭಿಪ್ರಾಯದಲ್ಲಿ ಭೂಮಿಗೂ ಇತರ ಉತ್ಪಾದನಾಂಗಗಳಿಗೂ ವ್ಯತ್ಯಾಸವಿದೆ. ಭೂಮಿ ಪ್ರಕೃತಿಯ ಪ್ರಸಾದ; ಆದರೆ ಇತರ ಉತ್ಪಾದನಾಂಗಗಳು ಮನುಷ್ಯಕೃತ. ಭೂಮಿಯ ಪರಿಮಾಣವನ್ನು ಹೆಚ್ಚಿಸಲು ಸಾಧ್ಯವಿಲ್ಲ; ಆದರೆ ಇತರ ಉತ್ಪಾದನಾಂಗಗಳ ಪರಿಮಾಣಗಳನ್ನು ಅಧಿಕ ಪ್ರತಿಫಲ ನೀಡಿ ಹೆಚ್ಚಿಸಬಹುದು. ಆದ್ದರಿಂದ ಭೂಮಿಯ ಪ್ರತಿಫಲವಾದ ಗೇಣಿ ಧಾನ್ಯದ ಬೆಲೆಗೆ ಸೇರುವುದಿಲ್ಲ. ಆದರೆ ಶ್ರಮ, ಬಂಡವಾಳ ಮತ್ತು ಸಂಘಟನೆಗೆ ಪ್ರತಿಫಲವೆನಿಸುವ ವೇತನ, ಬಡ್ಡಿ ಮತ್ತು ಲಾಭ ಇವು ಬೆಲೆಗೆ ಸೇರುತ್ತವೆ. 

ರಿಕಾರ್ಡೋನ ಗೇಣಿ ಸಿದ್ಧಾಂತವನ್ನು ಕುರಿತ ಟೀಕೆಗಳಿವು :

 ರಿಕಾರ್ಡೋ ಊಹಿಸಿದಂತೆ ಭೂಮಿಯಲ್ಲಿ ಮೂಲ ಮತ್ತು ಅವಿನಾಶಿ ಶಕ್ತಿಗಳಿವೆಯೆನ್ನುವುದು ಸರಿಯಲ್ಲ. ಏಕೆಂದರೆ ದೀರ್ಘಕಾಲದ ಬೇಸಾಯದ ಫಲವಾಗಿ ಭೂಮಿ ತನ್ನ ನೈಜ ಸಾರವನ್ನು ಕಳೆದುಕೊಂಡಿದೆ. ಗೊಬ್ಬರ ಮುಂತಾದವನ್ನು ಹಾಕಿ ಮನುಷ್ಯ ಅದನ್ನು ಕೃಷಿಗೆ ಯೋಗ್ಯವಾಗಿಟ್ಟುಕೊಂಡಿದ್ದಾನೆ. 
 ರಿಕಾರ್ಡೋ ಹೇಳಿರುವ ಕ್ರಮದಲ್ಲಿಯೇ ಬೇಸಾಯಕ್ಕೆ ಭೂಮಿಯನ್ನು ಆಕ್ರಮಿಸಿಕೊಳ್ಳಲಾಗುವು ದೆಂಬುದಕ್ಕೆ ಚಾರಿತ್ರಿಕ ನಿದರ್ಶನವಿಲ್ಲ. ಅನೇಕ ಕಡೆ ಫಲವತ್ತಾದ ಭೂಮಿಗೂ ಮುಂಚೆಯೇ ಕಳಪೆ ಜಮೀನನ್ನು ಬೇಸಾಯ ಮಾಡಲಾಗಿದೆ. 
 ಭೂಮಿಗೆ ಮಾತ್ರ ಗೇಣಿ ದೊರೆಯುವುದೆಂಬುದನ್ನು ಜೋನ್ ರಾಬಿನ್ಸನ್ ಮುಂತಾದ ಅರ್ಥಶಾಸ್ತ್ರಜ್ಞರು ಟೀಕಿಸಿದ್ದಾರೆ. ಭೂಮಿಗೆ ಗೇಣಿ ದೊರಕಲು ಕಾರಣ ಶ್ರೇಷ್ಠ ದರ್ಜೆಯ ಜಮೀನಿನ ಅಭಾವ. ಅಲ್ಪಾವಧಿಯಲ್ಲಿ ಈ ಮಾತು ಇತರ ಉತ್ಪಾದನಾಂಗಗಳಿಗೂ ಅನ್ವಯಿಸುತ್ತದೆಯೆಂಬುದು ಆಲ್ಫ್ರೆ ಮಾರ್ಷಲ್ ಮೊದಲ್ಗೊಂಡು ಹಲವರ ಅಭಿಪ್ರಾಯ. ಆದರೆ ಭೂಮಿಯ ಪ್ರತ್ಯೇಕತೆಯನ್ನು ತೋರಿಸುವುದಕ್ಕಾಗಿ ಅದರಿಂದ ಪ್ರಾಪ್ತವಾಗುವ ಆಧಿಕ್ಯವನ್ನು ಗೇಣಿ ಎಂದು ಕರೆದು, ಇತರ ಉತ್ಪಾದನಾಂಗಗಳ ಆಧಿಕ್ಯವನ್ನು ಅರೆ-ಗೇಣಿ (ಕ್ವಾಸೈ-ರೆಂಟ್) ಎಂದು ಆತ ಕರೆದಿದ್ದಾನೆ. 
 ಶ್ರೇಷ್ಠ ದರ್ಜೆಯ ಭೂಮಿಯ ಅಭಾವದಿಂದ ಗೇಣಿ ದೊರಕುವುದೆಂದು ರಿಕಾರ್ಡೋ ಭಾವಿಸಿದ್ದ. ಆದರೆ ಒಂದು ವೇಳೆ ಎಲ್ಲ ಭೂಮಿಯೂ ಶ್ರೇಷ್ಠ ದರ್ಜೆಯದೇ ಆಗಿದ್ದರೂ ಗೇಣಿ ಇರುತ್ತದೆ. ಏಕೆಂದರೆ ಇಳಿಮುಖ ಪ್ರತಿಫಲ ಪ್ರವೃತ್ತಿ ಕಂಡುಬರುವುದು ಅನಿವಾರ್ಯ. 
 ಗೇಣಿ ಬೆಲೆಗೆ ಸೇರುವುದಿಲ್ಲ ಎಂಬ ಅಭಿಪ್ರಾಯವನ್ನು ಮಿಲ್ ಮುಂತಾದವರು ಟೀಕಿಸಿದ್ದಾರೆ. ಒಟ್ಟಿನಲ್ಲಿ ಭೂಮಿಯ ಪರಿಮಾಣವನ್ನು ಹೆಚ್ಚಿಸಲು ಸಾಧ್ಯವಾಗದಿದ್ದರೂ ಯಾವುದೇ ನಿರ್ದಿಷ್ಟ ಉದ್ದೇಶಕ್ಕೆ ಬೇಕಾಗುವ ಭೂಮಿಯ ಪರಿಮಾಣವನ್ನು ಹೆಚ್ಚಿಸಬಹುದು. ಕಡಿಮೆ ಪ್ರತಿಫಲ ನೀಡುವ ಉದ್ದೇಶದಿಂದ ಹೆಚ್ಚಿನ ಪ್ರತಿಫಲ ನೀಡುವ ಉದ್ದೇಶಕ್ಕೆ ಭೂಮಿಯನ್ನು ವರ್ಗಾಯಿಸುವುದರಿಂದ ಇದು ಸಾಧ್ಯ. ಆಗ ವರ್ಗಾವಣೆಯ ವೆಚ್ಚ ಬೆಲೆಯಲ್ಲಿ ಸೇರುತ್ತದೆ. 
 ರಿಕಾರ್ಡೋ ಸಿದ್ಧಾಂತ ಪರಿಪುರ್ಣ ಸ್ಪರ್ಧೆಯ ಆಧಾರದ ಮೇಲೆ ರೂಪಿತವಾಗಿದೆ. ಆದರೆ ವಾಸ್ತವ ಪ್ರಪಂಚದಲ್ಲಿ ಪರಿಪುರ್ಣ ಸ್ಪರ್ಧೆಯ ಪರಿಸ್ಥಿತಿ ಇರುವುದಿಲ್ಲ. 

 ಈ ಕಾರಣಗಳಿಂದ ರಿಕಾರ್ಡೋ ಗೇಣಿ ಸಿದ್ಧಾಂತವನ್ನು ಟೀಕಿಸಿದರೂ, ಅದು ಅನೇಕ ರೀತಿಗಳಲ್ಲಿ ಉಪಯುಕ್ತವಾಗಿದೆ. ಜನಸಂಖ್ಯೆಯ ಒತ್ತಡ ಹೆಚ್ಚಿ ಆಹಾರಕ್ಕೆ ಬೇಡಿಕೆ ಹೆಚ್ಚಿದಂತೆಲ್ಲ ಕಡಿಮೆ ದರ್ಜೆಯ ಜಮೀನುಗಳನ್ನೂ ಬೇಸಾಯಕ್ಕೆ ತರಬೇಕಾಗುವುದೆಂಬ ಅಂಶವನ್ನು ಅದು ಒತ್ತಿ ಹೇಳುತ್ತದೆ. ಭೂಮಾಲೀಕ ವರ್ಗಕ್ಕೂ ಸಮಾಜದ ಇತರ ವರ್ಗಗಳಿಗೂ ಘರ್ಷಣೆಗೆ ಕಾರಣವೇನೆಂಬುದನ್ನು ಇದು ತಿಳಿಸುತ್ತದೆ. ಗೇಣಿ ಶ್ರಮರಹಿತ ವರಮಾನವೆಂದು ರಿಕಾರ್ಡೋ ಪ್ರತಿಪಾದಿಸಿದ ಮೇಲೆ ಅದನ್ನು ತೆರಿಗೆಯ ರೂಪದಲ್ಲಿ ಸರ್ಕಾರ ಕಸಿದುಕೊಳ್ಳಬೇಕೆಂದು ಮಿಲ್ ಒತ್ತಾಯಪಡಿಸಿದ. ಗೇಣಿಯನ್ನು ರದ್ದುಗೊಳಿಸಿದರೆ ಜನಸಾಮಾನ್ಯರ ದಾರಿದ್ರ್ಯ ನಿವಾರಣೆಯಾಗುವುದೆಂದು ಹೆನ್ರಿ ಜಾರ್ಜ್ ಭಾವಿಸಿದ. ಒಟ್ಟಿನಲ್ಲಿ ರಿಕಾರ್ಡೋ ಗೇಣಿ ಸಿದ್ಧಾಂತ ಸಮಾಜವಾದಿಗಳ ಅಭಿಪ್ರಾಯವನ್ನು ಪುಷ್ಟಿಗೊಳಿಸಲು ಸಹಾಯಕವಾಯಿತು.

ಆಧುನಿಕ ಸಿದ್ಧಾಂತ 

ರಿಕಾರ್ಡೋ ಸಿದ್ಧಾಂತಕ್ಕನುಸಾರ ಗೇಣಿ ನಿಸರ್ಗದತ್ತವಾದ ಭೂಮಿಯ ವೈಶಿಷ್ಟ್ಯ. ಮೇಲುದರ್ಜೆಯ ಹಾಗೂ ಕೆಳದರ್ಜೆಯ ಭೂಮಿಗಳ ಉತ್ಪಾದನ ಸಾಮಥರ್ಯ್‌ಗಳ ವ್ಯತ್ಯಾಸವೇ ಗೇಣಿಗೆ ಕಾರಣ. ಆದ್ದರಿಂದ ಗೇಣಿ ಸಿದ್ಧಾಂತ ಭೂಮಿಗೆ ಮಾತ್ರ ಅನ್ವಯಿಸುತ್ತದೆ.

ಆದರೆ ಆಧುನಿಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಗೇಣಿ ಸಿದ್ಧಾಂತವನ್ನು ಭೂಮಿಗೆ ಮಾತ್ರವೇ ಅನ್ವಯಿಸಬೇಕಾಗಿಲ್ಲ. ಅದು ಎಲ್ಲ ಉತ್ಪಾದನಾಂಗಗಳಿಗೂ ಅನ್ವಯಿಸುತ್ತದೆ. ಭೂಮಿಯಂತೆಯೇ ಶ್ರಮ, ಬಂಡವಾಳ, ಸಂಘಟನೆ ಇವುಗಳ ಉತ್ಪಾದನ ಸಾಮಥರ್ಯ್‌ಗಳ ವ್ಯತ್ಯಾಸದಿಂದಲೂ ಗೇಣಿ ತಲೆದೋರುವುದೆನ್ನಬಹುದು. ದಕ್ಷ ಕಾರ್ಮಿಕರು ಮತ್ತು ಸಂಘಟಕರಿಂದ ಬರುವ ಅಧಿಕ ಪ್ರತಿಫಲವನ್ನು ಸಾಮಥರ್ಯ್‌ ಗೇಣಿ ಎನ್ನಬಹುದು. ಹಾಗೆಯೇ ಬಂಡವಾಳಕ್ಕೆ ದೊರಕುವ ಸದವಕಾಶದಿಂದಾಗಿ ಬರುವ ಅಧಿಕ ಪ್ರತಿಫಲವನ್ನು ಸದವಕಾಶ ಗೇಣಿ ಅಥವಾ ಅವಸರ ಗೇಣಿ ಎನ್ನಬಹುದು. ಈ ದೃಷ್ಟಿಯಲ್ಲಿ ಗೇಣಿಗೂ ವೇತನಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ವಿಕ್ಸ್ಟೀಡ್ ಹೇಳಿದ್ದಾನೆ. ವಾಕರ್ ಎಂಬ ಅಮೆರಿಕನ್ ಅರ್ಥಶಾಸ್ತ್ರಜ್ಞ ಲಾಭದ ಗೇಣಿ ಸಿದ್ಧಾಂತ ಎಂಬ ಪ್ರತ್ಯೇಕ ಸಿದ್ಧಾಂತವನ್ನೇ ಪ್ರತಿಪಾದಿಸಿದ್ದಾನೆ. ಇದರಿಂದ ವ್ಯಕ್ತವಾಗುವ ಅಂಶವೆಂದರೆ, ಗೇಣಿಯನ್ನು ಎಲ್ಲ ಉತ್ಪಾದನಾಂಗಗಳಲ್ಲೂ ಕಾಣಬಹುದು. ಮಾರ್ಷಲ್ ಹೇಳಿದಂತೆ ಗೇಣಿ ವಿಶಾಲತರ ಜಾತಿಯೊಂದರ (ಜೀನಸ್) ಪ್ರಮುಖ ಪ್ರಭೇದ (ಸ್ಪೀಷೀಸ್). ಆದ್ದರಿಂದ ಗೇಣಿ ಸಿದ್ಧಾಂತವನ್ನು ಭೂಮಿಗೆ ಮಾತ್ರವೇ ಅನ್ವಯಿಸದೆ ಎಲ್ಲ ಉತ್ಪಾದನಾಂಗಗಳಿಗೂ ಅನ್ವಯಿಸುವ ಒಂದು ಸಾಮಾನ್ಯ ಸಿದ್ಧಾಂತವಾಗಿ ರೂಪಿಸಬೇಕು. ಇದೇ ಆಧುನಿಕ ಗೇಣಿ ಸಿದ್ಧಾಂತದ ಉದ್ದೇಶ. 

ಜಾನ್ ರಾಬಿನ್ಸನ್ ಪ್ರಕಾರ ಆಧುನಿಕ ಗೇಣಿ ಸಿದ್ಧಾಂತದ ಮುಖ್ಯಾಂಶಗಳು ಇವು: ಗೇಣಿಗೆ ಮೂಲ ಕಾರಣ ಉತ್ಪಾದನಾಂಗದ ಅಭಾವ; ಅಂದರೆ ಅದರ ಬೇಡಿಕೆಗೆ ತಕ್ಕ ಪ್ರಮಾಣದಲ್ಲಿ ಪುರೈಕೆಯಿಲ್ಲದಿರುವುದು. ಇದು ಭೂಮಿಗೆ ಹೇಗೆ ಅನ್ವಯಿಸುವುದೋ ಹಾಗೆಯೇ ಇತರ ಉತ್ಪಾದನಾಂಗಗಳಿಗೂ ಅನ್ವಯಿಸುತ್ತದೆ. ನಿಸರ್ಗದತ್ತವಾದ ಭೂಮಿಯ ಪರಿಮಾಣವನ್ನು ಹೇಗೆ ಹೆಚ್ಚಿಸಲಾಗುವುದಿಲ್ಲವೋ ಹಾಗೆಯೇ ಮಾನವಕೃತವಾದ ಇತರ ಉತ್ಪಾದನಾಂಗಗಳ ಪರಿಮಾಣವನ್ನೂ ಅಲ್ಪಾವಧಿಯಲ್ಲಿ ಹೆಚ್ಚಿಸಲಾಗುವುದಿಲ್ಲ. 

ಹೀಗಿರುವಾಗ ಅಲ್ಪಾವಧಿಯಲ್ಲಿ ಯಾವುದಾದರೂ ಉತ್ಪಾದನಾಂಗವನ್ನು ಹೆಚ್ಚು ಹೆಚ್ಚು ಪರಿಮಾಣಗಳಲ್ಲಿ ಉಪಯೋಗಿಸಿದರೆ, ಅದರ ಸೀಮಾಂತ ಏಕಮಾನದ ವರಮಾನ ಅದರ ಉತ್ಪನ್ನಕ್ಕೆ ಸಮನಾಗಿರುತ್ತದೆ. ಅದಕ್ಕೆ ಮೇಲ್ಮಟ್ಟದ ಏಕಮಾನಗಳಿಗೆ ಹೆಚ್ಚಿನ ವರಮಾನ ದೊರೆಯುತ್ತದೆ. ಆ ಹೆಚ್ಚುವರಿಯನ್ನು ಗೇಣಿ ಎನ್ನಬಹುದು. 

ಈ ದೃಷ್ಟಿಯಲ್ಲಿ ಎಲ್ಲ ಉತ್ಪಾದನಾಂಗಗಳ ಪರಿಸ್ಥಿತಿಯೂ ಸ್ಥೂಲವಾಗಿ ಒಂದೇ. ವ್ಯತ್ಯಾಸವಿಷ್ಟೆ: ಭೂಮಿಯ ಪರಿಮಾಣ ಖಾಯಂ ಆಗಿ ನಿಶ್ಚಿತವಾಗಿರುತ್ತದೆ. ಇತರ ಉತ್ಪಾದನಾಂಗಗಳ ಪರಿಮಾಣ ತಾತ್ಕಾಲಿಕವಾಗಿ ನಿಶ್ಚಿತವಾಗಿರುತ್ತದೆ. ಸಾಕಷ್ಟು ಸಮಯ ದೊರೆತರೆ ಇವುಗಳ ಪರಿಮಾಣವನ್ನು ಹೆಚ್ಚಿಸಬಹುದು. 

ಹೀಗೆ ಉತ್ಪಾದನಾಂಗಗಳಿಗೆ ಅಲ್ಪಾವಧಿಯಲ್ಲಿ ಅಭಾವವಿರುವಾಗ ಅವುಗಳಿಗೆ ಪರ್ಯಾಯ ಬೇಡಿಕೆಗಳಿರುತ್ತವೆ. ಆಗ ಅವು ಅಧಿಕ ವರಮಾನವನ್ನರಸುತ್ತ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಗಾವಣೆ ಹೊಂದಲು ಪ್ರಯತ್ನಿಸುತ್ತವೆ. ಈ ಪರಿಸ್ಥಿತಿಯಲ್ಲಿ ಯಾವುದೇ ಉತ್ಪಾದನಾಂಗವನ್ನು ಒಂದು ಉದ್ಯಮದಲ್ಲಿ ಉಳಿಸಿಕೊಳ್ಳಲು ಅದಕ್ಕೆ ಸಲ್ಲಬೇಕಾದ ಬೆಲೆಯೇ ವರ್ಗಾವಣೆ ಸಂಪಾದನೆ (ಟ್ರಾನ್ಸ್‌ಫರ್ ಅರ್ನಿಂಗ್ಸ್‌). ಎಂದರೆ ಒಂದು ಉತ್ಪಾದನಾಂಗ ತನಗಿರುವ ಪರ್ಯಾಯ ಉದ್ಯೋಗಾವಕಾಶಗಳಲ್ಲಿ ಅತ್ಯಂತ ಫಲದಾಯಕ ಉದ್ಯೋಗದಿಂದ ಪಡೆಯುವ ಸಂಪಾದನೆ. ಈ ವರ್ಗಾವಣೆ ಸಂಪಾದನೆಯನ್ನು ಮೀರಿ ಬರುವ ವರಮಾನ, ಗೇಣಿ. ಉದಾಹರಣೆಗೆ ಒಬ್ಬ ಕಾರ್ಮಿಕನಿಗೆ ಒಂದು ಗಿರಣಿಯಲ್ಲಿ ದಿನಕ್ಕೆ 20 ರೂ. ವೇತನವಿದ್ದು, ಒಂದು ಅಂಗಡಿಯಲ್ಲಿ 12 ರೂ. ವೇತನ ದೊರೆಯುವುದಾದರೆ, ಆಗ ಗಿರಣಿಯ ದೃಷ್ಟಿಯಿಂದ ಅವನ ವರ್ಗಾವಣೆ ಸಂಪಾದನೆ 12 ರೂ. ಆತ ಗಿರಣಿಯ ಕೆಲಸ ಬಿಡದಂತೆ ತಡೆಯಲು ಅಷ್ಟನ್ನಾದರೂ ಕೊಡಲೇಬೇಕು. ಅದಕ್ಕೆ ಹೆಚ್ಚಾಗಿ ಕೊಡುವ 8 ರೂ. ಗೇಣಿ ಎನಿಸಿಕೊಳ್ಳುತ್ತದೆ.

ಆಲ್ಫ್ರೆ ಮಾರ್ಷಲ್ ಗೇಣಿ ಎಂಬ ಪದವನ್ನು ಭೂಮಿಯ ಹೆಚ್ಚಳದ ವರಮಾನಕ್ಕೇ ಮೀಸಲಿಟ್ಟು, ಇತರ ಉತ್ಪಾದನಾಂಗಗಳಿಗೆ ಅಲ್ಪಾವಧಿಯಲ್ಲಿ ದೊರೆಯುವ ಆಧಿಕ್ಯವನ್ನು ಅರೆ-ಗೇಣಿ ಅಥವಾ ಒಂದು ಬಗೆಯ ಗೇಣಿ ಎನ್ನುತ್ತಾನೆ. ಏಕೆಂದರೆ, ಗೇಣಿ ದೀರ್ಘಾವಧಿಯಲ್ಲಿಯೂ ಇರುತ್ತದೆ; ಆದರೆ ಅರೆ-ಗೇಣಿ ಅಲ್ಪಾವಧಿಯಲ್ಲಿ ಮಾತ್ರ ಇರುತ್ತದೆ; ದೀರ್ಘಾವಧಿಯಲ್ಲಿ ಅದು ಅದೃಶ್ಯವಾಗುತ್ತದೆ.
ಅರೆ-ಗೇಣಿ ತಲೆದೋರಲು ಕಾರಣವೇನೆಂದರೆ, ಅಲ್ಪಾವಧಿಯಲ್ಲಿ ಆ ಉತ್ಪಾದನಾಂಗದ ಪರಿಮಾಣವನ್ನು ಬೇಡಿಕೆಗೆ ಅನುಗುಣವಾಗಿ ಹೆಚ್ಚಿಸಲು ಸಾಧ್ಯವಾಗು ವುದಿಲ್ಲ. ಆಗ ಆ ಉತ್ಪಾದನಾಂಗದ ಕೆಳದರ್ಜೆಯು ಏಕಮಾನಗಳನ್ನು ಉಪಯೋಗಿಸಿ ಕೊಳ್ಳಬೇಕಾಗುತ್ತದೆ. ಎಂದರೆ ಮೇಲ್ದರ್ಜೆಯ ಏಕಮಾನಗಳಿಗೆ ಹೆಚ್ಚಿನ ವರಮಾನ ಬರುತ್ತದೆ. ಆ ಆಧಿಕ್ಯವೆ ಗೇಣಿ. ಆದರೆ ಇದು ತಾತ್ಕಾಲಿಕ. ಏಕೆಂದರೆ, ಕಾಲಕ್ರಮದಲ್ಲಿ ಉತ್ತಮ ದರ್ಜೆಯ ಏಕಮಾನಗಳ ಸರಬರಾಯಿ ಹೆಚ್ಚಿದಂತೆ ಈ ಹೆಚ್ಚಳ ಕಡಿಮೆಯಾಗುತ್ತದೆ. ಉದಾಹರಣೆಗೆ, ಮೀನಿಗೆ ಇದ್ದಕ್ಕಿದ್ದಂತೆಯೇ ಅಧಿಕ ಬೇಡಿಕೆ ತಲೆದೋರಿದರೆ, ಮೀನಿನ ಬಲೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಕೂಡಲೇ ಬಲೆಗಳ ಸರಬರಾಯಿಯನ್ನು ಹೆಚ್ಚಿಸಲಾಗುವುದಿಲ್ಲ. ಆದ್ದರಿಂದ ಹಳೆಯ ಬಲೆಗಳನ್ನು ಹೊರತರಲಾಗುತ್ತದೆ. ಆಗ ಉತ್ತಮ ಬಲೆಗಳಿಗೆ ಹಳೆಯ ಬಲೆಗಳಿಗಿಂತ ಹೆಚ್ಚಿನ ಬೆಲೆ ಬರುತ್ತದೆ. ಈ ಆಧಿಕ್ಯವೇ ಗೇಣಿ ಇದ್ದಂತೆ. ಆದರೆ ಇದು ತಾತ್ಕಾಲಿಕ ಮಾತ್ರ. ಏಕೆಂದರೆ, ಕಾಲಕ್ರಮದಲ್ಲಿ ಹೊಸ ಬಲೆಗಳು ತಯಾರಾಗಿ ಬರುತ್ತವೆ. ಬಲೆಗಳು ಪಡೆಯುತ್ತಿದ್ದ ಗೇಣಿ ಹೋಗುತ್ತದೆ.

ಅಲ್ಪಾವಧಿಯಲ್ಲಿ ಗೇಣಿ ಮತ್ತು ಅರೆ-ಗೇಣಿ ಎರಡೂ ಒಂದೇ. ಆದರೆ ದೀರ್ಘಾವಧಿಯಲ್ಲಿ ಅವು ಭಿನ್ನವಾದಂಥವು. ಈ ವ್ಯತ್ಯಾಸವನ್ನು ಮಾರ್ಷಲ್ ಉಲ್ಕಾ ಶಿಲೆಗಳ ಉದಾಹರಣೆಯ ಮೂಲಕ ತೋರಿಸಿದ್ದಾನೆ: ಒಂದೆಡೆ ಉಲ್ಕಾವೃಷ್ಟಿಯ ಫಲವಾಗಿ ಸಾವಿರಾರು ಉಲ್ಕಾ ಶಿಲೆಗಳು ಬಿದ್ದು ಚದರಿದವೆನ್ನೋಣ. ಒಂದನ್ನೂ ಬಿಡದೆ ಅವನ್ನು ಆರಿಸಿಕೊಳ್ಳಲಾಯಿತೆಂದೂ ಭಾವಿಸೋಣ. ಅವು ಕೈಗಾರಿಕೆಗಳಿಗೆ ಉಪಯುಕ್ತವೆಂದು ಕಂಡುಬಂದರೆ ಅವನ್ನು ಆರಿಸಿಟ್ಟುಕೊಂಡಿರುವವರು ಅಧಿಕ ಹಣ ಪಡೆಯುತ್ತಾರೆ. ಆದರೆ ಅಧಿಕ ಬೆಲೆ ಕೊಟ್ಟರೂ ಅವುಗಳ ಪರಿಮಾಣವನ್ನು ಹೆಚ್ಚಿಸಲಾಗುವುದಿಲ್ಲ. ಹೀಗೆ ಅಭಾವವಿರುವಾಗ ಅವುಗಳಿಗೆ ಕೊಡುವ ಬೆಲೆ ಗೇಣಿ ಎನಿಸಿಕೊಳ್ಳುತ್ತದೆ. ಒಂದು ವೇಳೆ ಅವು ಸುಲಭವಾಗಿ ದೊರಕುವಂತಾದರೆ ಅವುಗಳಿಗೆ ಗೇಣಿಯೇ ಇರುವುದಿಲ್ಲ. ಹಾಗಲ್ಲದೆ ಅವುಗಳ ಅಭಾವ ತಾತ್ಕಾಲಿಕವಾಗಿದ್ದು, ದೀರ್ಘಾವಧಿಯಲ್ಲಿ ಅವುಗಳ ಪರಿಮಾಣವನ್ನು ಹೆಚ್ಚಿಸಬಹುದಾದರೆ ಅವುಗಳಿಗೆ ಅಲ್ಪಾವಧಿಯಲ್ಲಿ ದೊರೆಯುವ ಬೆಲೆ ಅರೆ-ಗೇಣಿ ಎನಿಸಿಕೊಳ್ಳುತ್ತದೆ.   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ